ತೋರಣಗಲ್ಲು -
ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಹೋಬಳಿ ಕೇಂದ್ರ.  ಬಳ್ಳಾರಿ - ಹೊಸಪೇಟೆ ರಸ್ತೆಯ ಮೇಲೆ, ಹೊಸಪೇಟೆಯಿಂದ ಸುಮಾರು 21 ಕಿಮೀ. ಪೂರ್ವಕ್ಕೆ, ಬಳ್ಳಾರಿಯಿಂದ 30 ಕಿಮೀ. ಪಶ್ವಿಮಕ್ಕೆ ಇದೆ.  ಗ್ರಾಮದ ವಿಸ್ತೀರ್ಣ 9,191 ಎಕರೆ.  ಜನಸಂಖ್ಯೆ 6,324 (2001).  ಈ ಗ್ರಾಮ ವಿಜಯನಗರ ರಾಜಧಾನಿಗೆ ಹೊರ ಅಗಸೆಯಂತೆ ಇದ್ದುದರಿಂದ ತೋರಣಗಲ್ಲು ಎಂಬ ಹೆಸರು ಪೆಡೆಯಿತೆಂದು ತಿಳಿದುಬರುತ್ತದೆ.  ವಿಜಯನಗರ ಉಕ್ಕಿನ ಕಾರ್ಖಾನೆ ಇಲ್ಲಿ ಸ್ಥಾಪಿತವಾಗುತ್ತಿರುವುದರಿಂದ ಇದು ವಿಶೇಷ ಮಹತ್ವ ಪಡೆದಿದೆ.  ಕೆಲವು ವರ್ಷಗಳಲ್ಲಿ ಇದು ಸುಮಾರು 5 ಲಕ್ಷ ಜನರಿರುವ ನಗರವಾಗಿ ಬೆಳೆಯುವ ನಿರೀಕ್ಷೆ ಇದೆ.

ಇಲ್ಲಿ ಅರಣ್ಯ ಇಲಾಖೆಯ ಮರದ ಕೋಠಿಯೊಂದುಂಟು. ಈ ಊರಿನ ಪಕ್ಕದಲ್ಲೇ ಇರುವ ಶಂಕುವಿನಾಕಾರದ ಬೆಟ್ಟದ ಸುತ್ತ ಭಾರಿ ಬಂಡೆಗಳಿವೆ. ಈ ಬೆಟ್ಟದ ಉತ್ತರ ಭಾಗದ ಬಂಡೆಗಳಲ್ಲಿ ಫೆಲ್‍ಸ್ಟಾರ್‍ನ ದೊಡ್ಡ ದೊಡ್ಡ ಹಳಕುಗಳಿವೆ. 

ಇಲ್ಲಿಯ ಉಕ್ಕಿನ ಕಾರ್ಖಾನೆಯ ನಿರ್ಮಾಣಕಾರ್ಯ 1971ರಲ್ಲಿ ಆರಂಭವಾಯಿತು. ಇದು ಭಾರತದ ಐದನೆಯ ಸಮಗ್ರ ಉಕ್ಕು ಕಾರ್ಖಾನೆ. ಇದು ಆರಂಭದಲ್ಲಿ 20 ಲಕ್ಷ ಟನ್ ಉಕ್ಕನ್ನು ತಯಾರಿಸುವುದಿದ್ದು ಮುಂದೆ 40 ಲಕ್ಷ ಟನ್ ಉತ್ಪಾದಿಸುತ್ತದೆ.

ತೋರಣಗಲ್ಲಿನ ಹತ್ತಿರದಲ್ಲಿ ಅತ್ಯಂತ ಉತ್ತಮವಾದ ಕಬ್ಬಿಣ ಅದಿರಿನ ನಿಕ್ಷೇಪವಿದೆ. ಇದು ಇಲ್ಲಿಯ ಕಾರ್ಖಾನೆಯ ಇಂದಿನ ಹಾಗೂ ಭಾವೀ ಆವಶ್ಯಕತೆಗಳನ್ನು ಪೂರೈಸಬಲ್ಲುದಲ್ಲದೆ ಹೊರದೇಶಕ್ಕೂ ನಿರ್ಯಾತ ಮಾಡಬಹುದಾದಷ್ಟು ವಿಫುಲವಾಗಿದೆ. ಇಲ್ಲಿಯ ಅದಿರು ಪ್ರಪಂಚದಲ್ಲೇ ಅತ್ಯುತ್ಕøಷ್ಟವೆನಿಸಿದೆ. ಹತ್ತಿರದಲ್ಲೆ ಹರಿಯುವ ತುಂಗಭದ್ರಾ ನದಿಯಿಂದ ನೀರು ಧಾರಾಳವಾಗಿ ಒದಗಿಬರುತ್ತದೆ. ಶರಾವತಿ ಮತ್ತು ತುಂಗಭದ್ರಾ ಜಲವಿದ್ಯುದಾಗಾರಗಳಿಂದ ಪೋಷಿತವಾದ ರಾಜ್ಯ ವಿದ್ಯುತ್ ಜಾಲ ತೋರಣಗಲ್ಲಿನ ಬಳಿಯೇ ಹರಿಯುವುದರಿಂದ ವಿದ್ಯುತ್ ಸೌಲಭ್ಯವಿದೆ ರಸ್ತೆ ಹಾಗೂ ರೈಲ್ವೆ ಸಂಪರ್ಕವುಂಟು. ತೋರಣಗಲ್ಲು ಒಂದು ರೈಲ್ವೆ ನಿಲ್ದಾಣ. ಇದರ ಬಳಿಯ ಹೊಸಪೇಟೆಯಲ್ಲಿ ಬ್ರಾಡ್ ಮತ್ತು ಮೀಟರ್ ಗೇಜ್ ರೈಲು ಮಾರ್ಗಗಳಿವೆ. ಈ ಕೈಗಾರಿಕೆಗೆ ಅಗತ್ಯವಾದ ಕಲ್ಲಿದ್ದಲು ಹೊರಗಡೆಯಿಂದ ಬರಬೇಕಾಗುತ್ತದೆ.

ಇಲ್ಲಿಯ ಉಕ್ಕಿನ ಸಂಕೀರ್ಣಕ್ಕಾಗಿ ಸುಮಾರು 10,000 ಎಕರೆ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಇಲ್ಲಿ ಸುಮಾರು 20,000-25,000 ಕುಶಲ ಹಾಗೂ ಅಕುಶಲ ಕಾರ್ಮಿಕರಿಗೆ ನೌಕರಿ ದೊರೆಯಬಹುದು. ತೋರಣಗಲ್ಲಿನ ಈ ಕಾರ್ಖಾನೆ ಆರಂಭವಾದಾಗ ಇದೊಂದು ಮುಖ್ಯ ಕೈಗಾರಿಕಾ ಕೇಂದ್ರವಾಗಿ ಪರಿಣಮಿಸುತ್ತದೆ.

ತೋರಣಗಲ್ಲು ಹೋಬಳಿಯಲ್ಲಿ 35 ಗ್ರಾಮಗಳಿವೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ